ಮಾದಾಪುರ
ಭಾರತದ ಕರ್ನಾಟಕ ರಾಜ್ಯದ ಕೊಡಗು ಜಿಲ್ಲೆಯ ಸೋಮವಾರಪೇಟೆ ತಾಲ್ಲೂಕಿನ ಒಂದು ಗ್ರಾಮ. ಇಲ್ಲಿ ಕೊಡಗು ರಾಜರ ಸಮಾಧಿಗಳಿವೆ. ಮಡಿಕೇರಿಯಿಂದ ಕೊಡ್ಲಿಪೇಟೆ ಮತ್ತು ಸಕಲೇಶಪುರಕ್ಕೆ ಹೋಗುವ ಮಾರ್ಗದಲ್ಲಿ ಮಡಿಕೇರಿಯಿಂದ ಉತ್ತರಕ್ಕೆ 21 ಕಿಮೀ ದೂರದಲ್ಲೂ ಸೋಮವಾರಪೇಟೆಯ ದಕ್ಷಿಣದಲ್ಲಿ 19 ಕಿಮೀ ದೂರದಲ್ಲೂ ಇದೆ. ಹಿಂದೆ ಈ ಊರಿಗೆ ಮಹದೇವಪುರವೆಂಬ ಹೆಸರಿತ್ತು. ಇಲ್ಲಿಯ ಮಾದಾಪುರ ನದಿಯ ದಡದಲ್ಲಿ ಹಾಲೇರಿ ಮನೆತನದ ಪ್ರಖ್ಯಾತರಾದ ದೊಡ್ಡ ವೀರರಾಜೇಂದ್ರ ಒಡೆಯನ ತಂದೆ ಮೊದಲಿನ ಲಿಂಗರಾಜೇಂದ್ರ ಒಡೆಯನ ಸಮಾಧಿ ಇದೆ. ದೊಡ್ಡ ವೀರರಾಜೇಂದ್ರ ಇಲ್ಲಿ ಬಸವೇಶ್ವರನನ್ನು ಪ್ರತಿಷ್ಠಾಪಿಸಿದನಲ್ಲದೆ ಒಂದು ವೀರಶೈವ ಮಠವನ್ನೂ ಕಟ್ಟಿಸಿ ಅದಕ್ಕೆ ಒಂದು ಗ್ರಾಮವನ್ನೇ ಜಹಗೀರಾಗಿ ಕೊಟ್ಟಿದ್ದ. ಮಾದಾಪುರ ಹೊಳೆಯ ಮಠದಿಂದ ದಸರ ಶಿವರಾತ್ರಿ ಹಬ್ಬಗಳಲ್ಲಿ ಹತ್ತಿರದ ಹಳ್ಳಿಗೆ ಜಂಬೂಸವಾರಿ ಹೋಗÀುತ್ತಿದ್ದುದರಿಂದ ಈ ಊರಿಗೆ ಜಂಬೂರು ಎಂದು ಹೆಸರೂ ಉಂಟು.

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ